ಕೀಟದಂಶನ

ಕೀಟಗಳು ಮನುಷ್ಯನನ್ನು ಕಡಿಯುವುದರಿಂದ ಆಗುವ ಕೆಲವು ದುಷ್ಪರಿಣಾಮಗಳನ್ನು ಇಲ್ಲಿ ಚರ್ಚಿಸಿದೆ. ಕೀಟ ಕಡಿದಲ್ಲಿ ತುರಿಕೆ ಉಂಟಾಗಬಹುದು; ಹೆಚ್ಚು ನಂಜೇರಿದರೆ ಬಾವು ಏಳಬಹುದು; ಕೆಲವು ಕೀಟಗಳು ಕಡಿದಾಗಲಂತೂ ಪ್ರಾಣಾಪಾಯವೇ ಒದಗಬಹುದು. ಕುದುರೆ ನೊಣಗಳು ಕಚ್ಚಿದಾಗ ಅಂತ್ರಾಕ್ಸ್ ಎಂಬ ಕಾಯಿಲೆ ಬರುತ್ತದೆ. ಕೆಲವು ವಿಶಿಷ್ಟ ಜಾತಿಯ ಸೊಳ್ಳೆಗಳು ಕಡಿದಾಗ ಸ್ಟ್ರೆಪ್ಟೋಕಾಕಲ್ ವಿಷಾಣುಗಳಿಂದ ನಂಜುಂಟಾಗಬಹುದು. ಚಿಗಟ ರೋಗ ಮುಂತಾದ ಪ್ಲೇಗ್, ಸೊಳ್ಳೆ ಕಡಿಯುವುದರಿಂದ ಮಲೇರಿಯ, ಆನೆಕಾಲಿನ ರೋಗ ಮುಂತಾದ ರೋಗಗಳು ಬರುತ್ತವೆ. ಅನೇಕ ನಿರ್ದುಷ್ಟವಾದ ಕಾಯಿಲೆಗಳ ಉಗಮವನ್ನು ಕೀಟದಂಶನದಲ್ಲಿ ಗುರುತಿಸಬಹುದು. ತುಲಾರೀಮಿಯಾ, ರಿಕೆಟ್ಸಿಯಲ್ ಜ್ವರ, ಟೈಫಾಯಿಡ್, ಡೆಂಗು ಜ್ವರ, ಹಳದಿ ಜ್ವರ, ಕಪ್ಪು ಜ್ವರ ಮುಂತಾದ ರೋಗಗಳು ಕೀಟದಂಶನದಿಂದಲೇ ಬರುವಂಥವು.

 ಕೀಟ ಕಡಿದ ಸ್ಥಳದಲ್ಲಿ ವಿಷ ಸೇರಿ ರಕ್ತ ಕಣಗಳು ಹಾಳಾಗಬಹುದು. ನರಗಳಿಗೆ ವಿಷವೇರಬಹುದು, ಇಲ್ಲವೇ ಆ ಸ್ಥಳದಲ್ಲಿ ಒಂದು ವಿಧವಾದ ವೇದನೆಯುಂಟಾಗಬಹುದು. ಆ ಭಾಗದಲ್ಲಿ ಉರಿಯೂತ ಕಾಣಿಸಿಕೊಳ್ಳುತ್ತದೆ. ಚರ್ಮ ಉಬ್ಬಿಕೊಳ್ಳುತ್ತದೆ. ಸೂಕ್ಷತೆಗೆ ಪ್ರತಿಕ್ರಿಯೆಯುಂಟಾಗುತ್ತದೆ. ದುಂಬಿ, ಕಣಜ, ದೊಡ್ಡ ಕಣಜಗಳು ಕಡಿದಾಗ ತುಂಬ ನೋವಾಗುತ್ತದೆ. ನಾಲಗೆ ಮತ್ತು ಗಂಟಲಲ್ಲಿ ಕಚ್ಚಿದರೆ ಅಲ್ಲಿ ಊದಿಕೊಂಡು ಉಸಿರಾಡುವುದೇ ಕಷ್ಟವಾಗುತ್ತದೆ. ದನಿಪೆಟ್ಟಿಗೆಗೆ ಕಚ್ಚಿದರೆ ಶ್ವಾಸನಾಳ ದ್ವಾರ ದಪ್ಪವಾಗಿ ಪ್ರಾಣವೇ ಹೋಗಬಹುದು. ಬಲು ಕೋಮಲ ಜೀವಿಗಳಿಗೆ ದುಂಬಿಗಳು ಅಥವಾ ಕಣಜಗಳು ಕಡಿದಾಗ ರಕ್ತದ ಒತ್ತಡ ಇಳಿದು ರಕ್ತನಾಳಗಳು ವಿಕಾಸಗೊಂಡು ರಕ್ತಚಲನೆಗೆ ತೊಂದರೆಯಾಗಿ ಜ್ಞಾನತಪ್ಪಿಹೋಗುತ್ತದೆ. ಇಂಥವರು ಕೇವಲ ಕೆಲವೇ ಮಿನಿಟುಗಳೊಳಗಾಗಿ ಸಾಯುವುದು ಉಂಟು.

 ಕೀಟದಂಶನದಿಂದ ಒದಗುವ ವಿವಿಧ ವಿಕಾರಗಳಿಗೆ ಯುಕ್ತ ಔಷಧೋಪಚಾರ ತತ್‍ಕ್ಷಣ ನಡೆಯಬೇಕು. ಜಂತು ಚಿಕ್ಕದು ಎಂದಮಾತ್ರಕ್ಕೆ ಅದರಿಂದ ಒದಗುವ ಕಿರುಕುಳ, ಹಾನಿ ಕಡಿಮೆ ಪ್ರಮಾಣದ್ದೇ ಆಗಿರಬೇಕಾಗಿಲ್ಲ.

 

(ಎ.ಎನ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ